ಅವತ್ತು
ಬೆಂಗಳೂರಿನ 'ಮೆಟ್ರೋ ರೈಲು' ಸಂಚಾರ ಉದ್ಘಾಟನೆಯ ದಿನ... ಜನ ಸಂಭ್ರಮದಿಂದ ಟಿಕೆಟ್
ಖರೀದಿಸಿ ಮೆಟ್ರೋ ಪ್ರಯಾಣದ ಸವಿ ಅನುಭವಿಸುವ ಖುಷಿಯಲ್ಲಿದ್ದರು..ನ್ಯೂಸ್ ಛಾನಲ್ ಒಂದು
ಅದನ್ನ ಲೈವ್ ಆಗಿ ತೋರಿಸುತ್ತಿತ್ತು.. ಅಂತಹದ್ದೊಂದು ಗುಂಪಿನಲ್ಲಿ ಸಾಮಾನ್ಯ
ಪ್ರಯಾಣಿಕರಂತೆ ಟಿಕೆಟ್ ಧರಿಸಿ ಸಂಭ್ರಮಿಸುತ್ತಿದ್ದ ಒಂದು ಹೆಣ್ಣು ಜೀವ ಕಾಣಿಸಿತು..
ಅದು ಸಂತೋಷವೋ, ಸಂತಸದ ದಿಗಿಲೋ ತಿಳಿಯುತ್ತಿರಲಿಲ್ಲ.. 'ಮೆಟ್ರೋ ನಮ್ಮ ಶಂಕರನ ಕನಸು ಅದು
ಇವತ್ತು ನನಸಾಗಿದೆ ಅದಕ್ಕೆ ಟಿಕೆಟ್ ತಗೊಂಡಿದೀನಿ ನೋಡಿ, ಅವನ ನೆನಪಲ್ಲಿ
ಪ್ರಯಾಣಿಸ್ತೀನಿ ಅಂತ ಹೇಳಿದ್ದು ಬೇರಾರು ಅಲ್ಲ, ಅವರೇ ಅರುಂಧತಿ ನಾಗ್!!ಒಂದೆಡೆ ಶಂಕರನ
ಕನಸು ನನಸಾದ ಸಂಭ್ರಮ ಇನ್ನೊಂದೆಡೆ ಅದೇ ಸಮಯಕ್ಕೆ ಆತನಿಲ್ಲದ ದುಖ: ಅವರ ಮುಖಭಾವದಲ್ಲಿ
ಬೇಡವೆಂದರೂ ಎದ್ದು ಕಾಣಿಸುತ್ತಿತ್ತು. ಒಂದು ಕ್ಷಣ ನನಗೆ ತಿಳಿಯದಂತೆ ಕಣ್ಣಂಚು
ಒದ್ದೆಯಾಯಿತು. ಹೌದು 'ನಮ್ಮ ಶಂಕರ'ನ ತಾಕತ್ತೇ ಅಂತಹುದು. 25ವರ್ಷಗಳ ಹಿಂದೆಯೇ
ಇಂತಹದ್ದೊಂದು ಕನಸಿನ ಪ್ರಾಜೆಕ್ಟ್ ಸಿದ್ದಪಡಿಸಿ ರಾಮಕೃಷ್ಣ ಹೆಗಡೆ
ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪ್ರಸ್ತಾಪ ಮಾಡಿದ್ದು ನಮ್ಮ ವರ್ಕಾಲಿಕ್
ನಟ-ನಿರ್ದೇಶಕ-ನಾಟಕಕಾರ ಮಾನವೀಯ ಸೆಲೆಯ ಶಂಕರ್ ನಾಗ್.
ಶಂಕರ್ ನಾಗ್ ನಮ್ಮನಗಲಿ ಸೆ.30ಕ್ಕೆ ಸರಿಯಾಗಿ 21ವರ್ಷಗಳು, ಆತ ಕೇವಲ ನಟನಾಗಿ,
ನಿರ್ದೇಶಕನಾಗಿ ಉಳಿಯದೇ ಸಮಾಜ ಮುಖಿಯಾಗಿ ಚಿಂತಿಸುವ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ
ಅಜರಾಮರ ಎನಿಸಿದ್ದಾರೆ. ಶಂಕರ್ ನಾಗರಕಟ್ಟೆ ಉತ್ತರ ಕರ್ನಾಟಕದ ಹೊನ್ನಾವರ ತಾಲೂಕಿನ
ಮಲ್ಲಾಪುರ ಹಳ್ಳಿಯಲ್ಲಿ ಜನಿಸಿದ್ದು 9ನೇ ನವೆಂಬರ್ 1954ರಂದು. ಸಹಜಾಭಿನಯಕ್ಕೆ ಖ್ಯಾತಿ
ಪಡೆದಿರುವ ಮೇರು ನಟ ಅನಂತ್ ನಾಗ್ ರ ಸಹೋದರಾಗಿದ್ದ ಶಂಕರ್ ನಾಗ್ ವಿದ್ಯಾಭ್ಯಾಸ ಮುಗಿದ
ನಂತರ ಪ್ರಯಾಣ ಬೆಳೆಸಿದ್ದು ಮುಂಬೈಗೆ. ಅಲ್ಲಿ ಮರಾಠಿ ಹಾಗೂ ಕೊಂಕಣಿ ನಾಟಕಗಳಲ್ಲಿ
ಭಾಗವಹಿಸುತ್ತಿದ್ದ ಶಂಕರ ಜೀವನೋಪಾಯಕ್ಕೆ ಬ್ಯಾಂಕ್ ನೌಕರಿಗೂ ಸೇರಿದ್ದರೂ. ಆದರೆ
ರಂಗಭೂಮಿಯ ಸೆಳೆತ ಅವರನ್ನು ಕಲಾ ಲೋಕಕ್ಕೆ ಸೆಳೆದು ಬಿಟ್ಟಿತು. ಹೀಗಿರುವಾಗ ಅದೊಂದು ದಿನ
ಗಿರಿಶ್ ಕಾರ್ನಾಡರು ದೆಹಲಿಯಲ್ಲಿ ನಡೆದ ಅಂತರ ರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ
ಶ್ರೆಷ್ಠ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿ ಪಡೆದ ಅಕಿರಾ ಕುರುಸೋವ ಅವರ
ಜಪಾನಿ ಭಾಷೆಯ "ಸೆವೆನ್ ಸಮುರಾಯ್ಸ್" ಚಿತ್ರವನ್ನು ಕನ್ನಡದಲ್ಲಿ ತೆರೆಗೆ ತರಲು ಸಿದ್ದತೆ
ನಡೆಸಿದ್ದರು. ಆ ಚಿತ್ರದ ಪ್ರಧಾನ ಪಾತ್ರಕ್ಕೆ ಸೂಕ್ತ ನಾಯಕನನ್ನು ಹುಡುಕುತ್ತಿದ್ದಾಗ
ಮರಾಠಿ ರಂಗಭೂಮಿಯಲ್ಲಿ ಗಮನ ಸೆಳೆದಿದ್ದ ಶಂಕರ ಕಣ್ಣಿಗೆ ಬಿದ್ದಿದ್ದ. ಕಾರ್ನಾಡರು
ಆಹ್ವಾನ ನೀಡಿದಾಗ ಮೊದಲಿಗೆ ನಿರಾಕರಿಸಿದ್ದ ಶಂಕರ್ ನಂತರ ಸಹೋದರನ ಒತ್ತಾಸೆಯ ಮೇರೆಗೆ
'ಒಂದಾನೊಂದು ಕಾಲದಲ್ಲಿ " ಚಿತ್ರವನ್ನು ಒಪ್ಪಿಕೊಂಡರು. ದೇಸೀ ನೆಲಕ್ಕೆ ಒಗ್ಗಿಸಿದ್ದ
ಕಥೆಗೆ ಕೇವಲ ನಟನಾಗದೇ ತಾನೇ ಪಾತ್ರವಾಗಿ ಹೋದ ಶಂಕರ ಸಿನಿಮಾ ರಂಗದಲ್ಲಿ ತನ್ನ ಛಾಪನ್ನು
ಮೂಡಿಸಿ ಬಿಟ್ಟಿದ್ದ, ಅಷ್ಟೇ ಅಲ್ಲ ಆ ಚಿತ್ರದ ನಟನೆಗಾಗಿ ಆತನಿಗೆ ರಾಷ್ಟ್ರಪತಿಗಳ
ಗೋಲ್ಡನ್ ಪೀಕಾಕ್ ಅವಾರ್ಡ್ ನ ಗರಿಯನ್ನು ಮುಡಿಗೇರಿಸಿಕೊಂಡಿದ್ದ. ನೆನಪಿರಲಿ
ಕನ್ನಡದಲ್ಲಿ ಅಂತಹ ಪುರಸ್ಕಾರ ಪಡೆದ ಏಕೈಕ ನಟ ಶಂಕರ್ ನಾಗ್. 1978ರಿಂದ ಆರಂಭವಾದ ಶಂಕರನ
ಸಿನಿಮಾಯಾನ 1990ರ ವರೆಗೆ ಸತತವಾಗಿ 12ವರ್ಷ ಮುಂದುವರೆದಿತ್ತು. 90ಕ್ಕೂ ಹೆಚ್ಚು
ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕರ ಒಂದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ.
ನಟನಾಗಿ ಜನರನ್ನ ಆಕರ್ಷಿಸಿದ್ದಕ್ಕಿಂತ ನಿರ್ದೇಶಕನಾಗಿ ಹೆಚ್ಚು ಗಮನ ಸೆಳೆದ ಶಂಕರ್ ನಾಗ್
70 ರ ದಶಕದಲ್ಲೇ ಅಡ್ವಾನ್ಸ್ ಆದ ಆಫ್ ಬೀಟ್ ಸಿನಿಮಾಗಳನ್ನು ನಿರ್ದೆಶಿಸಿದ್ದನಲ್ಲದೇ
ಅದಕ್ಕಾಗಿ ಅಂತರ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದರು. ಏಕ ಕಾಲದಲ್ಲಿ ರಂಗಭೂಮಿಗೂ ಗಮನ
ನೀಡಿದ ಶಂಕರ್ ವಿದೇಶಿ ನೆಲದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಬಹುಶ: ರಂಗಭೂಮಿಯ
ಮೂಲಕ ಶಂಕರ್ ವಿದೇಶಗಳಲ್ಲಿ ನೀಡಿದಷ್ಟು ಪ್ರದರ್ಶನಗಳನ್ನ ಮತ್ಯಾವ ಕಲಾವಿದನೂ ನೀಡಿರಲಾರ.
ತನ್ನದೇ ನಿರ್ದೇಶನದ 'ಮಿಂಚಿನ ಓಟ' 'ಆಕ್ಸಿಡೆಂಟ್', 'ಗೀತಾ', 'ನೋಡೀಸ್ವಾಮಿ ನಾವಿರೋದೇ
ಹೀಗೆ' ಯಂತಹ ಹಲವು ವಿಭಿನ್ನ ಧಾಟಿಯ ಸಿನಿಮಾಗಳನ್ನು ನೀಡಿದ ಶಂಕರ್ ನಾಗ್
ತಾಂತ್ರಿಕವಾಗಿ ಅಂದಿನ ದಿನಗಳಲ್ಲಿ ಸವಾಲಾಗಿದ್ದ ಛಾಯಾಗ್ರಹಣದ ಸಾಧ್ಯತೆಗಳನ್ನು ಭಾರತೀಯ
ಚಿತ್ರರಂಗದಲ್ಲಿ ಮೊದಲಭಾರಿಗೆ ಬಳಕೆಗೆ ತಂದದ್ದು ಇದೇ ಶಂಕರ್ ನಾಗ್.. 7ರಾಷ್ಟ್ರಗಳಿಗೆ
ಭೇಟಿ ನೀಡಿ ತಂತ್ರಜ್ಣಾನದ ಸಾಧ್ಯತೆಗಳನ್ನು ಒಗ್ಗಿಸಿಕೊಂಡು ನಿರ್ದೇಶಿಸಿದ ಆ ಚಿತ್ರ
ಡಾ|| ರಾಜ್ ನಟಿಸಿದ್ದ 'ಒಂದು ಮುತ್ತಿನ ಕಥೆ'.
ಶಂಕರ್ ಯೋಚಿಸುವ ಪರಿಯನ್ನ ಆತ ನಿರ್ದೇಶಿಸಿ ಚಿತ್ರಗಳನ್ನು ನೋಡಿದರೆ
ತಿಳಿಯಬಹುದು, ಸಾಮಾಜಿಕ ಪರಿಣಾಮ ಬೀರುವ ಮತ್ತು ವಾಸ್ತವ ಜಗತ್ತಿನ ಅರಿವು ಮೂಡಿಸುವ ಮೂಲಕ
ಚಿಂತನೆಗೆ ಹಚ್ಚುವ ಚಿತ್ರಗಳನ್ನು ನಿರ್ದೇಶಿಸಿದ ಶಂಕರ್, ಅಂತರ ರಾಷ್ಟ್ರೀಯ ಮಟ್ಟದಲ್ಲಿ
ಧೃಢವಾಗಿ ತಮ್ಮನ್ನು ಪರಿಚಯಿಸಿ ಕೊಂಡದ್ದು 'ಮಾಲ್ಗುಡಿ ಡೇಸ್' ಎಂಬ ಕಿರುತೆರೆ ಸೀರಿಯಲ್
ಮೂಲಕ. ತಾನು ಬೆಳೆಯುವ ಜೊತೆಗೆ ಸಾವಿರಾರು ಕಲಾವಿದರು, ತಂತ್ರಜ್ಞರನ್ನು ಬೆನ್ನು ತಟ್ಟಿ
ಉತ್ಸಾಹ ತುಂಬಿ ಬೆಳೆಸಿದ ಶಂಕರ್... ಮಾನವೀಯ ಸೆಲೆಯಿಂದಾಗಿ ಸಾಮಾನ್ಯ ಜನರ ಬದುಕಿನಲ್ಲೂ
ಅಮರವಾಗಿ ಉಳಿದಿದ್ದಾರೆ. 'ಆಟೋ ರಾಜ' ಚಿತ್ರದ ನಂತರ ಖಾಯಂ ಆಗಿ ಆಟೋದವರ ಆರಾಧ್ಯ
ಧೈವವಾಗಿ ಬೆಳೆದು ನಿಂತ ಶಂಕರ್ ನ ಎತ್ತರವನ್ನು ಎಷ್ಟೋ ಮಂದಿ ನಟರು ಬಂದು ಹೋದರು
ಏರಲಾಗಿಲ್ಲವೆಂದರೆ ಅವನ ತಾಕತ್ತನ್ನು ಊಹಿಸಬಹುದು. ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ
ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಶಂಕರ್ ನಿಂದ ಪ್ರೇರಿತರಾಗಿ ಯಶಸ್ಸು ಕಂಡಿರುವ ಹಲವಾರು
ಮಂದಿ ಯನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು.
ಸ್ವಾಭಿಮಾನದ ಸಂಕೇತದಂತಿದ್ದ ಶಂಕರ್ ನಾಗ್ ಕನ್ನಡ ಚಿತ್ರಗಳ ಧ್ವನಿ ಗ್ರಹಣ ಹಾಗೂ
ಸಂಕಲನಕ್ಕಾಗಿ ತಮಿಳುನಾಡಿಗೆ ಹೋಗಬೇಕಾದಂತಹ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಕೇತ್
ಸ್ಟುಡಿಯೋ ಸ್ಥಾಪಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಸರೆಯಾದವರು ಶಂಕರ್ ನಾಗ್.
ಅವತ್ತಿನ ದಿನಗಳಲ್ಲೇ ನಂದಿ ಬೆಟ್ಟಕ್ಕೆ ರೋಪ್ ವೇ, ನಗರದಲ್ಲಿ ಮೆಟ್ರೋ ರೈಲು ಯೋಜನೆ,
ಬಡವರಿಗೆ ಕಡಿಮೆ ಬೆಲೆಯಲ್ಲಿ ನಿರ್ಮಿಸಿಬಹುದಾದಂತಹ ಮನೆಗಳನ್ನು ಹಾಲೆಂಡ್ ದೇಶದ
ಮಾದರಿಯಲ್ಲಿ ನಿರ್ಮಿಸುವ ಪ್ರಸ್ತಾವ ಮುಂದಿರಿಸಿದ್ದು ಹಾಗು ದೇಶದಲ್ಲಿ ರೆಸಾರ್ಟ್ ಮಾದರಿ
ಕಂಟ್ರಿ ಕ್ಲಬ್ ಸ್ತಾಪಿಸಿ ಅಲ್ಲಿ ನಿರಂತರ ರಂಗಭೂಮಿಗೆ ಉತ್ತೇಜನ ನೀಡುವ ಮಹತ್ವದ
ಸಂಕಲ್ಪ ಮಾಡಿ ಶ್ರಮಿಸಿದ್ದು ಇದೇ ಶಂಕರ್ ನಾಗ್.
ಚಿತ್ರರಂಗದಲ್ಲಿರುವ ತೆರೆಯ ಹಿಂದಿನ ಮತ್ತು ಮೇಲಿನ ಸಾವಿರಾರು ಮಂದಿ ಇವತ್ತಿಗೂ
ಶಂಕರ್ ನಾಗ್ ರನ್ನು ನೆನಪಿಸಿಕೊಂಡು ಕಣ್ಣೀರಾಗುತ್ತಾರೆಂದರೆ ಅದಕ್ಕೆ ಶಂಕರ್ ನಾಗ್ ರ
ಆಲೋಚನ ಪರಿ ಹಾಗೂ ಆತನ ಕನಸುಗಳ ಮೂಟೆ, ಪ್ರೀತಿ ವಾತ್ಸಲ್ಯ, ಪ್ರೋತ್ಸಾಹ ಕಾರಣ. ಕೆರೆಯ
ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ತಾನು ಕಂಡ ಕನಸುಗಳ ಸಾಕಾರಕ್ಕೆ ಇನ್ನಿಲ್ಲದ
ಶ್ರಮ ಹಾಕುತ್ತಿದ್ದ ಶಂಕರ್ ನಾಗ್ ನಿದ್ರಿಸುತ್ತಿದುದು ತುಂಬಾ ಕಡಿಮೆ. ಅಂದರೆ ಸತ್ತ
ಮೇಲೆ ದೀರ್ಘ ನಿದ್ದೆಗೆ ಅವಕಾಶವಿದೆ ಹಾಗಿರುವಾಗ ಬದುಕಿರುವಾಗ ದೀರ್ಘ ನಿದ್ರೆ ಮಾಡಿ ಸಮಯ
ಹಾಳು ಮಾಡಬಾರದು ಎಂಬ ನಿಟ್ಟಿನಲ್ಲಿ ಶ್ರಮವನ್ನು ಧಾರೆಯೆರೆಯುತ್ತಿದ್ದ ಶಂಕರ್ ನಾಗ್
ಯಾವತ್ತಿಗೂ ಜನಮಾನಸದಲ್ಲಿ ಅಜರಾಮರರೇ ಆಗಿದ್ದಾರೆ. ಒಂದು ಉತ್ತಮ ಅಭಿರುಚಿಯನ್ನ,
ಅನುಭಾವವನ್ನ ನಮಗೆ ಉಳಿಸಿಹೋಗಿರುವ ಶಂಕರ್ ನಾಗ್ ಸದಾಕಾಲ ನೆನಪಿಗೆ ಅರ್ಹರೇ ಆಗಿದ್ದಾರೆ,
ದೈಹಿಕಾವಾಗಿ ಇಲ್ಲದಿದ್ದರೂ ತಮ್ಮ ಕೆಲಸದ ಮೂಲಕ ನಮ್ಮೊಂದಿಗೆ ಇರುವ ಶಂಕರ್ ಹೆಸರನ್ನು
'ನಮ್ಮ ಮೆಟ್ರೋ'ಗೆ ಇಟ್ಟರೆ ಅದು ಸಾರ್ಥಕವಾದೀತು. ಸರ್ಕಾರ ದಿಸೆಯಲ್ಲಿ ಕ್ರಮ ವಹಿಸಬೇಕು,
ಸಮಸ್ತ ಅಭಿಮಾನಿಗಳು ಮತ್ತು ಚಿತ್ರರಂಗದ ಒತ್ತಾಸೆ ಈ ನಿಟ್ಟಿನಲ್ಲಿ ಹೊರಹೊಮ್ಮಿದರೆ ಇದು
ಸಾಧ್ಯವಾದೀತೇನೋ?